Up Next: Deepavali on November 8th, 2025 📍 Lake Oswego High School
ಆತ್ಮೀಯ ಕನ್ನಡ ಬಂಧುಗಳಲ್ಲಿ ವಂದನೆಗಳು,
ನಮ್ಮ ಪೋರ್ಟ್ಲ್ಯಾಂಡ್ ಕನ್ನಡ ಕೂಟ ನಡೆದು ಬಂದ ದಾರಿಯ ಚಿತ್ರಣ -
ಅನಾದಿ ಕಾಲದಿಂದ ಬೆಂಗಳೂರು ರಾಮಪ್ರಸಾದ್ ಹಾಗೂ ಅವರ ಧರ್ಮಪತ್ನಿ ಗಾಯತ್ರಿ, ತಿರುವಲ್ಳೂರು ಕೇಶವನ್ ಹಾಗೂ ಅವರ ಧರ್ಮಪತ್ನಿ ನಂದಿನಿ, ಮತ್ತು ತಿರುಮಾಲಿ ನಾಗೇಂದ್ರ ಹಾಗೂ ಅವರ ಧರ್ಮ ಪತ್ನಿ ಪರಿಮಳ ಅವರುಗಳು ತಮ್ಮ ತಮ್ಮ ಮನೆಯಲ್ಲಿ ಚಿಕ್ಕದಾಗಿ ಹಾಗೂ ಚೊಕ್ಕವಾಗಿ ವರ್ಷದಲ್ಲಿ ಎರಡು ಬಾರಿ ಭೇಟಿಯಾಗಿ ದೀಪಾವಳಿ ಮತ್ತು ಯುಗಾದಿಯನ್ನು ಆಚರಿಸುತ್ತಿದ್ದರು. ೧೯೯೦ರ ಸರಹದ್ದಿನಲ್ಲಿ ಆನಂದ ವರ್ಧನ ಹಾಗೂ ಜಯಶ್ರೀ ದಂಪತಿಗಳ ಆಗಮನವಾಯಿತು. ಮೂರಕ್ಕೆ ಒಂದು ಕೂಡಿದರೆ ಐದು ಎಂಬಂತೆ ಈ ನಾಲ್ಕು ಸಂಸಾರದವರು ಒಟ್ಟಿಗೆ ಸೇರಿ ಪ್ರಪ್ರಥಮವಾಗಿ ದೀಪಾವಳಿಯನ್ನು ಒಂದು ಸಾಮಾಜಿಕ ಸಮಾರಂಭದಂತೆ ರೊಕ್ ಕ್ರೀಕ್ ಚರ್ಚಿನಲ್ಲಿ ಆಚರಿಸಿದರು. ಆ ದೀಪಾವಳಿಯೇ ಇಂದಿನ ಪೋರ್ಟ್ಲ್ಯಾಂಡ್ ಕನ್ನಡ ಕೂಟಕ್ಕೆ ಬುನಾದಿ ಆಯಿತು. ಆ ದೀಪಾವಳಿ ಕಾರ್ಯಕ್ರಮವೇ ಪೋರ್ಟ್ಲ್ಯಾಂಡ್ ಕನ್ನಡ ಕೂಟದ ಜನನದ ನಾಂದಿಯಾಯಿತು. ಶ್ರೀಯುತ ಸುರೇಶ ಚಿತ್ತೂರು ಮತ್ತು ಅರುಣ ಕೂಟದ ಪತಾಕೆಯನ್ನು ಉದಾರವಾಗಿ ದಾನ ಮಾಡಿದರು. ಇಲ್ಲಿ ರಾರಾಜಿಸುತ್ತಿರುವ ಕೇತನ ಅವರುಗಳ ಕೊಡುಗೆ. ನಮ್ಮ ನಂಜನಗೂಡು ಬಿ.ವಿ. ಪಂಡಿತರ ಮೊಮ್ಮಗ ಮುಕುಂದ ಮೂರ್ತಿ ಯವರು ಮೈಕಾಸುರನ ಮರ್ಧಿಸಿ ಕನ್ನಡ ಕೂಟದ ನಿನಾದ ೬೪ ದಿಕ್ಕುಗಳಲ್ಲಿ ಕೇಳಿ ಬರುವಂತೆ ಮಾಡಿದರು. ಅವರು ಕಾಡನ್ನು ಕಡಿದು ಮಾಡಿದ ದಾರಿಗೆ ಡಾಮರು ಹಾಕಿ ಉನ್ನತಗೊಳಿಸಿದವರು ಸುಹಾಸ್ ಮತ್ತು ವನಿತಾ ಕುರ್ಸೆ ದಂಪತಿಗಳು. ನಮಗೆ ಸುಶ್ರಾವ್ಯ ಸಂಗೀತ ನೀಡುತ್ತ ಬಂದಿರುವ ಸಾಯಿ ಪ್ರಸಾದ್ ಮತ್ತು ಉಷಾ ದಂಪತಿಗಳು ಕೂಟದ ಹಿಮ್ಮೇಳ ಗಾಯಕರಾಗಿ ಒಮ್ಮತದಿಂದ ಚುನಾಯಿತರಾದರು.
ತ್ರಿಮೂರ್ತಿಗಳಿಂದ ಸ್ಥಾಪಿತವಾದ ಈ ನಿಮ್ಮ, ನಮ್ಮ ಕನ್ನಡ ಕೂಟಕ್ಕೆ ಪ್ರಚಾರ ಪ್ರಾಧಿಕಾರದ ಹೊಣೆ ಹೊತ್ತವರು ನಮ್ಮ ಧಾರವಾಡದ ಪಾಟೀಲರು. ಅವರು ಹಾಕಿದ ಪಂಚಾಂಗದ ಮೇಲೆ ಅವಿನಾಶ್ ಮತ್ತು ಮಾಧವಿ ದಂಪತಿಗಳು, ತದ ನಂತರ ಅರವಿಂದ-ಶ್ವೇತ ದಂಪತಿಗಳು ಒಂದು ಪಂಚತಾರ ಮಳಿಗೆಯನ್ನೇ ಕಟ್ಟಿ ದೇಶ ವಿದೇಶಗಳಲ್ಲಿ ಪೋರ್ಟ್ಲ್ಯಾಂಡ್ ಕನ್ನಡ ಕೂಟದ ಹಿರಿಮೆಯನ್ನು ಪಸರಿಸಿದರು.
ನಮ್ಮ ಕನ್ನಡ ಕೂಟದ ಈ ಕಳೆದು ಬಂದ ದಾರಿಯಲ್ಲಿ ಇನ್ನು ಅನೇಕ ದಿಗ್ಗಜರು ಕಲೆ ಹಾಕಿತ್ತು, ಅವರಲ್ಲಿ ಅಗ್ರಗಣ್ಯರು, ಸರ್ವಶ್ರೀ ಗಳಾದ ರಮೇಶ ಮತ್ತು ಸುಮಾ ಕೃಷ್ಣಮೂರ್ತಿ, ಗೋಕುಲ್ ಮತ್ತು ಚಂದ್ರಿಕಾ ಪ್ರಹ್ಲಾದ, ಕೊಡುಗೈ ದಾನಿಗಳಾದ ಶಂಕರ್ ಮತ್ತು ಪ್ರಭಾ ವಿಶ್ವನಾಥನ್, ವಸಂತ ಮತ್ತು ಜ್ಯೋತಿ ಕಲಾವರ್, ಅನು ಮತ್ತು ಮುರಳಿ ತಿರುಮಲ, ಚಿತ್ರಾ ಮತ್ತು ವಸಂತ್ ತೋವಿನಕೆರೆ, ಹೀಗೆ ಅನೇಕನೇಕರು.
ಇಪ್ಪತ್ತರ ಅಂಚಿನಲ್ಲಿ ಮಿಂಚಿನಂತೆ ರಾರಾಜಿಸುವ ನಮ್ಮ ಪೋರ್ಟ್ಲ್ಯಾಂಡ್ ಕನ್ನಡ ಕೂಟಕ್ಕೆ ಶುಭವನ್ನು ಕೋರುತ್ತೇವೆ. ನಮಸ್ಕಾರ. ಜೈ ಕರ್ನಾಟಕ !!